ಕೇನ್ಸ್, ಜಾನ್ ಮೇನರ್ಡ್

1883-1946. ಬ್ರಿಟಿಷ್ ಅರ್ಥಶಾಸ್ತ್ರಜ್ಞ. ಆರ್ಥಿಕ ಸಿದ್ಧಾಂತ ಕ್ಷೇತ್ರದ ಒಬ್ಬ ಯುಗಪುರುಷ, ಹಣಕಾಸು ವ್ಯವಹಾರ ತಜ್ಞ, ಗ್ರಂಥಪ್ರಿಯ, ವಿಮರ್ಶಕ, ರಾಜಕೀಯ ಪ್ರಬಂಧ, ಲೇಖಕ, ಕಲಾಪೋಷಕ. 1883ರ ಜೂನ್ 5ರಂದು ಕೇಂಬ್ರಿಜ್‍ನಲ್ಲಿ ಜನಿಸಿದ. ಪ್ರಸಿದ್ಧ ಅರ್ಥಶಾಸ್ತ್ರಜ್ಞನೂ ತರ್ಕಶಾಸ್ತ್ರಜ್ಞನೂ ಆಗಿದ್ದ ಜೆ.ಎನ್.ಕೇನ್ಸ ಇವನ ತಂದೆ. ವಿದ್ಯಾವತಿಯೂ ಕೇಂಬ್ರಿಜ್ ನಗರಾಧ್ಯಕ್ಷೆಯೂ ಆಗಿದ್ದ ಫ್ಲಾರೆನ್ಸ್ ಅಡ ಇವನ ತಾಯಿ. ಈಟನ್‍ನಲ್ಲಿ ಶಾಲಾ ಶಿಕ್ಷಣ ಪಡೆದು ತರುವಾಯ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಸುಪ್ರಸಿದ್ಧ ಅರ್ಥಶಾಸ್ತ್ರಜ್ಞನಾಗಿದ್ದ ಆಲ್‍ಫ್ರೆಡ್ ಮಾರ್ಷಲನ ಪಟ್ಟ ಶಿಷ್ಯನಾದ. ಆಗ ಇವನ ಆಸಕ್ತಿ ಕೇವಲ ಅಧ್ಯಯನಕ್ಕೆ ಸೀಮಿತವಾಗಿರಲಿಲ್ಲ. ಕೇಂಬ್ರಿಜ್ ನಗರದ ಸಾಂಸ್ಕøತಿಕ ಜೀವನದಲ್ಲಿ ಅಗ್ರಪಾತ್ರ ಹೊಂದಿದ್ದ ಗಣ್ಯವ್ಯಕ್ತಿಗಳ ವಿಶಿಷ್ಟ ಸಂಘವಾಗಿದ್ದ ಬ್ಲೂಮ್ಸ್ ಬರೀ ತಂಡದ ಸದಸ್ಯನಾಗಿ ಕಲಾಭಿರುಚಿಯನ್ನು ಬೆಳೆಸಿಕೊಂಡ.

	ಪದವೀಧರನಾದ ಅನಂತರ ಇಂಡಿಯ ಕಚೇರಿಯಲ್ಲಿ ಎರಡು ವರ್ಷಕಾಲ ಸೇವೆ ಸಲ್ಲಿಸಿ 1908ರಲ್ಲಿ ಕೆಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕನಾದ. 1911ರಲ್ಲಿ ಎಕನಾಮಿಕ್ ಜರ್ನಲ್ ಎಂಬ ಪ್ರಸಿದ್ಧ ನಿಯತಕಾಲಿಕದ ಸಂಪಾದಕತ್ವ ವಹಿಸಿಕೊಂಡು 1945ರ ವರೆಗೂ ಅದನ್ನು ನಡೆಸಿಕೊಂಡು ಬಂದ. 1913ರಲ್ಲಿ ನೇಮಿತವಾದ ರಾಯಲ್ ಕಮಿಷನ್ ಆನ್ ಇಂಡಿಯನ್ಸ್ ಕರೆನ್ಸಿ ಅಂಡ್ ಫಿನಾನ್ಸ್‍ನ ಸದಸ್ಯನಾಗಿ ಅಮೂಲ್ಯ ಸೇವೆ ಸಲ್ಲಿಸಿ, ಅದೇ ವರ್ಷ ಇಂಡಿಯನ್ ಕರೆನ್ಸಿ ಅಂಡ್ ಫಿನಾನ್ಸ್ ಎಂಬ ತನ್ನ ಮೊದಲ ಗ್ರಂಥವನ್ನು ಪ್ರಕಟಿಸಿದ. ಈ ಗ್ರಂಥದಲ್ಲಿ ಸಾಂಪ್ರದಾಯಿಕ ಹಣ ಸಿದ್ಧಾಂತದ ಹಿನ್ನೆಲೆಯಲ್ಲಿ ರೂಪಾಯಿಯ ಬೆಲೆಯ ಸಮಸ್ಯೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದಾನೆ. ಸ್ವರ್ಣ ವಿನಿಮಯ ಪ್ರಮಿತಿಯ ಬಗ್ಗೆ ಇದು ಮುಖ್ಯ ಆಧಾರ ಗ್ರಂಥವಾಗಿದೆ.

	ಒಂದನೆಯ ಮಹಾಯುದ್ಧದ ಕಾಲದಲ್ಲಿ ಕೇನ್ಸ್ ಬ್ರಿಟಿಷ್ ಸರ್ಕಾರದ ಆಹ್ವಾನದ ಮೇರೆಗೆ ಅಲ್ಲಿಯ ವಿತ್ತ ಶಾಖೆಯನ್ನು ಸೇರಿದ. ಅಲ್ಲಿ ವಿದೇಶಿ ಹಣ ಕುರಿತ ವಿಷಯದ ಚಿಂತನೆ ಈತನ ಪಾಲಿಗೆ ಸೇರಿದ ವಿಷಯವಾಗಿತ್ತು. 1919ರ ವರ್ಸೇಲ್ಸ್ ಶಾಂತಿ ಸಮ್ಮೇಳನದಲ್ಲಿ ಯುದ್ಧ ಪರಿಹಾರ ದ್ರವ್ಯದ ಇತ್ಯರ್ಥವೂ ಒಂದು ಮುಖ್ಯ ವಿಷಯವಾಗಿತ್ತು. ಈ ಬಗ್ಗೆ ಕೈಕೊಂಡ ಸಂಧಾನಗಳಲ್ಲಿ ಕೇನ್ಸ್ ಭಾಗವಹಿಸಿದ. ಆದರೆ, ಜರ್ಮನಿಯ ಮೇಲೆ ವಿಧಿಸಬಹುದಾದ ಪರಿಹಾರಧನದ ಬಗ್ಗೆ ತಾನು ಹಾಕಿದ ನ್ಯಾಯಸಮ್ಮತ ಅಂದಾಜು ಒಪ್ಪಿಗೆಯಾಗುವುದಿಲ್ಲವೆಂಬ ಸೂಚನೆ ಕಂಡುಬಂದದ್ದರಿಂದ ಸಮ್ಮೇಳನದ ಸದಸ್ಯತ್ವವನ್ನು ತ್ಯಜಿಸಿದ. ಶಾಂತಿ ಒಪ್ಪಂದದ ಪರಿಣಾಮಗಳ ಬಗ್ಗೆ ತನ್ನ ಅಭಿಪ್ರಾಯಗಳನ್ನು ಪ್ರಚುರಪಡಿಸುವುದಕ್ಕಾಗಿ ಎಕನಾಮಿಕ್ ಕಾನ್ಸಿಕ್ವೆನ್ಸಸ್ ಆಫ್ ದಿ ಪೀಸ್ ಎಂಬ ವಿಮರ್ಶಾತ್ಮಕ ಗ್ರಂಥ ರಚಿಸಿದ. ಈತನ ಆಳವಾದ ಜ್ಞಾನ, ವಾಸ್ತವದೃಷ್ಟಿ, ದೂರದರ್ಶಿತ್ವಗಳಿಗೆ ಈ ಗ್ರಂಥ ಒಂದು ನಿದರ್ಶನ. ಶಾಂತಿಕೌಲಿನ ಪ್ರಕಾರ ಜರ್ಮನಿಯ ಮೇಲೆ ವಿಧಿಸಲಾದ ಹೆಚ್ಚು ಮೊತ್ತದ ಸಮರ ಪರಿಹಾರ ಧನದ ಹೊರೆಯನ್ನು ಹೊರಲು ಅದಕ್ಕೆ ಸಾಧ್ಯವಾಗುವುದಿಲ್ಲವೆಂಬ ಅಂಶವನ್ನು ತರ್ಕಬದ್ಧ ರೀತಿಯಲ್ಲಿ ತೋರಿಸಿಕೊಟ್ಟ. ತದನಂತರ ಸಂಭವಿಸಿದ ಘಟನೆಗಳು ಈತನ ತರ್ಕ ಎಷ್ಟು ಸರಿಯೆಂಬುದನ್ನು ದೃಢಪಡಿಸಿದುವು.

	ಎ ಟ್ರೀಟೈಸ್ ಆನ್ ಪ್ರಾಬಬಿಲಿಟಿ ಎಂಬ ಗ್ರಂಥ 1921ರಲ್ಲೂ ಎ ರಿವಿಷನ್ ಆಫ್ ದಿ ಟ್ರೀಟಿ 1922ರಲ್ಲೂ ಪ್ರಕಟವಾದುವು. ಮೊದಲನೆಯದು ಆತನ ಅಸಾಧಾರಣ ಮೇಧಾಶಕ್ತಿ, ಗಣಿತವಿಜ್ಞಾನ ಹಾಗೂ ತರ್ಕಶಾಸ್ತ್ರ ಪಾಂಡಿತ್ಯಕ್ಕೆ ನಿದರ್ಶನವಾದರೆ, ಎರಡನೆಯದು ಅಂದಿನ ಪ್ರಪಂಚಸ್ಥಿತಿಗೆ ಸಂದರ್ಭೋಚಿತವಾದ ಆರ್ಥಿಕ ಪುನರುದಯ ನೀತಿರಚಿಸುವ ವಾಸ್ತವದೃಷ್ಟಿಗೆ ನಿದರ್ಶನವಾಗಿದೆ. ಕೇನ್ಸ್ ಅದೇ ಕಾಲದಲ್ಲಿ ನೇಷನ್ ಎಂಬ ಪತ್ರಿಕೆಗೆ ಲೇಖನಗಳನ್ನು ಬರೆದು, ಆರ್ಥಿಕ ತೊಂದರೆಗಳ ನಿವಾರಣೆಯ ಕಾರ್ಯದಲ್ಲಿ ಸರ್ಕಾರ ಹೆಚ್ಚು ಪಾತ್ರವಹಿಸಬೇಕೆಂದು ಪ್ರತಿಪಾದಿಸಿದ.

	1923ರಲ್ಲಿ ಕೇನ್ಸ್‍ನ ಟ್ರಾಕ್ಟ್ ಆನ್ ಮಾನಿಟರಿ ರಿಫಾಮ್ರ್ಸ್ ಎಂಬ ಗ್ರಂಥ ಪ್ರಕಟವಾಯಿತು. ಕೇಂಬ್ರಿಜ್ ಪಂಥದ ಹಣ ಸಿದ್ಧಾಂತದ ಸ್ಪಷ್ಟ ವಿವರಣೆ ಮತ್ತು ಹಣ ಪ್ರಮಿತಿಯನ್ನು ಕುರಿತ ಹೊಸ ಧೋರಣೆಯ ನಿರೂಪಣೆ-ಇವು ಈ ಗ್ರಂಥದ ಮುಖ್ಯಾಂಶಗಳಾಗಿವೆ. ಸ್ವರ್ಣಪ್ರಮಿತಿಯ ಅನುಪಯುಕ್ತತೆಯ ಬಗ್ಗೆ ಇತರ ಅರ್ಥಶಾಸ್ತ್ರಜ್ಞರೂ ಹಣ ಪ್ರಪಂಚದ ಕಾರ್ಯನಿರ್ವಾಹಕರೂ ಹತ್ತು ವರ್ಷಗಳ ತರುವಾಯ ಮನಗಂಡದ್ದನ್ನು ಕೇನ್ಸ್ ಆಗಲೇ ಗ್ರಹಿಸಿದ್ದ. ನಿಯಂತ್ರಿತ ಕರೆನ್ಸಿ ಪದ್ಧತಿಯನ್ನೂ ಕೇಂದ್ರೀಯ ಬ್ಯಾಂಕಿಂಗ್ ನೀತಿಯ ಪ್ರಾಮುಖ್ಯವನ್ನೂ ಈ ಗ್ರಂಥದಲ್ಲಿ ಕೇನ್ಸ್ ಪ್ರತಿಪಾದಿಸಿದ್ದಾನೆ.

	1925ರಲ್ಲಿ ರಷ್ಯದ ಪ್ರಸಿದ್ಧ ನರ್ತಕಿ ಲಿಡಿಯ ಲೊಪೊಕೋವಳೊಡನೆ ಕೇನ್ಸನ ವಿವಾಹವಾಯಿತು. ಕೇನ್ಸನ ತಾಯಿಯಂತೆ ಆತನ ಪತ್ನಿಯೂ ಅವನ ಬೌದ್ಧಿಕ ಚಟುವಟಿಕೆಗಳಿಗೆ ಹೆಚ್ಚಿನ ಬೆಂಬಲ ನೀಡಿದಳು. ಕೇನ್ಸನ ಅರ್ಥಶಾಸ್ತ್ರ ಅಧ್ಯಯನ ಎಂದಿಗಿಂತಲೂ ತೀವ್ರವಾಗಿ ಬೆಳೆಯತೊಡಗಿತು. 1930ರಲ್ಲಿ ಆತನ ಎ ಟ್ರೀಟೈಸ್ ಆನ್ ಮನಿ ಎಂಬ ಉದ್ಗ್ರಂಥದ ಎರಡು ಸಂಪುಟಗಳು ಪ್ರಕಟವಾದುವು. ಅಂದಿನವರೆಗೆ ಬೆಳೆದು ಬಂದಿದ್ದ ಹಣ ಸಿದ್ಧಾಂತಗಳನ್ನು ವಾಸ್ತವಾಂಶಗಳ ಒರೆಗಲ್ಲಿಗೆ ಹಚ್ಚಿ ನೋಡಿ ಅವಕ್ಕೆ ಆತ ನೀಡಿದ ಒಂದು ಹೊಸ ರೂಪವನ್ನೂ ಮುಂದೆ ಆತನ ಅತ್ಯಂತ ಪ್ರಸಿದ್ಧ ಮೂಲಗ್ರಂಥವಾದ ಜನರಲ್ ಥಿಯೊರಿಯಲ್ಲಿ ವಿಶದಪಡಿಸಿರುವ ಕೆಲವು ಹೊಸ ಭಾವನೆಗಳ ಬೀಜರೂಪವನ್ನೂ ಈ ಗ್ರಂಥದಲ್ಲಿ ಕಾಣಬಹುದು. ಆರ್ಥಿಕ ಏರಿಳಿತಗಳ ವಿಶ್ಲೇಷಣೆಯಲ್ಲಿ ಉಳಿತಾಯ ಮತ್ತು ಯೋಜನೆಗಳ ಸಂಬಂಧದ ಪ್ರಾಮುಖ್ಯದ ವಿವರಣೆ, ಹಣ ಸಿದ್ಧಾಂತದ ಹಾಗೂ ಹಣದ ಪೇಟೆಯ ಸಂಸ್ಥೆಗಳ ಸೂಕ್ಷ್ಮ ಪರಿಚಯ, ಬ್ಯಾಂಕುಗಳು ಪಾತ್ರದ ಬಗ್ಗೆ ಸಲಹೆಗಳು-ಇವೇ ಈ ಗ್ರಂಥದ ಮುಖ್ಯ ವಿಷಯಗಳು.

	1930ರಲ್ಲಿ ಸಂಭವಿಸಿದ ವಿಶ್ವದ ಆರ್ಥಿಕ ಮುಗ್ಗಟ್ಟಿನಲ್ಲಿ ಇಂಗ್ಲೆಂಡೂ ಸಿಕ್ಕಿಬಿದ್ದಾಗ ಕೇನ್ಸ್ ತನ್ನ ರಾಷ್ಟ್ರದ ಆರ್ಥಿಕ ಸಮಸ್ಯೆಗಳಿಗೆ ವಿಶೇಷ ಗಮನ ನೀಡಿದ. ವಿತ್ತೀಯ ಹಾಗೂ ಕೈಗಾರಿಕಾ ಸಮಸ್ಯೆಗಳ ಪರಿಶೀಲನೆಗಾಗಿ ಬ್ರಿಟಿಷ್ ಸರ್ಕಾರದಿಂದ ನೇಮಿತವಾದ ಮ್ಯಾಕ್ಮಿಲನ್ ಸಮಿತಿಯ ಸದಸ್ಯನಾಗಿ ಸೇವೆ ಸಲ್ಲಿಸಿದ. ಸಾರ್ವಜನಿಕ ಕಾಮಗಾರಿಗಳನ್ನು ಶಿಫಾರಸು ಮಾಡಿದ ಆ ಸಮಿತಿಯ ಅಲ್ಪಮತ ವರದಿಗೆ ತನ್ನ ಬೆಂಬಲ ನೀಡಿದ. ಸಾಂಪ್ರದಾಯಿಕ ಸಿದ್ಧಾಂತಗಳ ಆಧಾರದ ಮೇಲೆ ಆ ವರೆಗೆ ನಿರಾತಂಕ ವ್ಯಾಪಾರದ ಬೆಂಬಲಿಗನಾಗಿದ್ದ ಕೇನ್ಸ್ ರಕ್ಷಣಾ ವಾಣಿಜ್ಯ ನೀತಿಯ ಕಡೆ ವಾಲಿದ. ಇದು ಇಂಗ್ಲೆಂಡಿನ ಅಂದಿನ ಪರಿಸ್ಥಿತಿಯಲ್ಲಿ ಅವಶ್ಯಕವಾಗಿತ್ತೆಂಬುದು ಆತನ ಅಭಿಪ್ರಾಯವಾಗಿತ್ತು. 1933ರಲ್ಲಿ ಪ್ರಕಟವಾದ ದಿ ಮೀನ್ಸ್ ಟು ಪ್ರಾಸ್ಪೆರಿಟಿ ಎಂಬ ಕಿರುಹೊತ್ತಗೆಯಲ್ಲಿ ವಿತ್ತೀಯನೀತಿ, ಸಾರ್ವಜನಿಕ ಕಾಮಗಾರಿ, ಬಂಡವಾಳ ಬಜೆಟ್ಟು, ಸರ್ಕಾರಿ ಪ್ರವೇಶ-ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ವಿಶೇಷ ಸಲಹೆಗಳನ್ನು ನೀಡಿದ. ಎಸ್ಸೇಸ್ ಇನ್ ಬಯಾಗ್ರಫಿ ಎಂಬ ಗ್ರಂಥ ಅದೇ ವರ್ಷ ಪ್ರಕಟವಾಯಿತು. ಉತ್ತಮ ಶೈಲಿಯ ಆಂಗ್ಲ ಸಾಹಿತ್ಯ ನಿರ್ಮಾಣದಲ್ಲಿ ಆತನಿಗಿದ್ದ ಸಾಮಥ್ರ್ಯಕ್ಕೆ ಇದು ನಿದರ್ಶನವಾಗಿದೆ.

	ಹೀಗೆ ಕೇನ್ಸ್ ನಡೆಸುತ್ತಿದ್ದ ಕ್ರಿಯಾಶೀಲ ಕಾರ್ಯಕ್ರಮದೊಡನೆಯೇ, ತೆರೆಯಮರೆಯಲ್ಲೆಂಬಂತೆ, ಜನರಲ್ ಥಿಯೊರಿ ಆಫ್ ಎಂಪ್ಲಾಯ್‍ಮೆಂಟ್, ಇಂಟರೆಸ್ಟ್ ಅಂಡ್ ಮನಿ (ಉದ್ಯೋಗ, ಬಡ್ಡಿ ಮತ್ತು ಹಣ ಕುರಿತ ಸಾರ್ವತ್ರಿಕ ಸಿದ್ಧಾಂತ) ಎಂಬ ಬೃಹದ್‍ಗ್ರಂಥ ಆತನ ಪರಿಪಕ್ವವಾದ ಬುದ್ಧಿಶಕ್ತಿಯ ಫಲವಾಗಿ ಅವನ ಕುಶಲ ಹಸ್ತದಲ್ಲಿ ರೂಪುಗೊಳ್ಳುತ್ತಿತ್ತು. ಆರ್ಥಿಕ ಚಿಂತನೆಯಲ್ಲಿ ಕ್ರಾಂತಿಯನ್ನೇ ಉಂಟು ಮಾಡಿದ ಈ ಬೃಹದ್‍ಗ್ರಂಥದ ರಚನೆಯೇ ಆತನನ್ನು ಆರ್ಥಿಕ ಸಿದ್ಧಾಂತದ ಕ್ಷೇತ್ರದಲ್ಲಿ ಯುಗಪುರುಷನನ್ನಾಗಿ ಮಾಡಿದ ಮಹಾಕಾರ್ಯ. ಈ ಗ್ರಂಥದ ಭಾಗಗಳ ಹಸ್ತಪ್ರತಿ ಸಿದ್ಧವಾಗುತ್ತಿದ್ದಂತೆಯೇ ಆರ್.ಎಫ್.ಕಾಹ್ನ್, ಡಿ.ಎಚ್. ರಾಬರ್ಟ್‍ಸನ್, ಆರ್.ಜಿ. ಹಾಟ್ರೆ, ಜೋನ್ ರಾಬಿನ್ಸನ್, ರಾಯ್ ಹ್ಯಾರಡ್ ಇತ್ಯಾದಿ ಪ್ರಮುಖ ಅರ್ಥಶಾಸ್ತ್ರಜ್ಞರು ಅವನ್ನು ವಿಮರ್ಶಾತ್ಮಕವಾಗಿ ಓದಿ ನೋಡುವಲ್ಲಿ ನೆರವು ನೀಡಿದರು. 1936ರ ಜನವರಿಯಲ್ಲಿ ಇದು ಪ್ರಕಟವಾಯಿತು. ಆರ್ಥಿಕ ಪ್ರಪಂಚದಲ್ಲಿ ಹೊಸ ವಿಚಾರದ ಉದಯವಾದಂತಾಯಿತು. ಆಧುನಿಕ ಅರ್ಥಶಾಸ್ತ್ರದ ಮುನ್ನಡೆಗೆ ಇದು ಮುಖ್ಯ ಕಾರಣವಾಯಿತು. ಸಮಾಜಶಾಸ್ತ್ರ ಮತ್ತು ಮನ:ಶ್ಯಾಸ್ತ್ರಗಳ ಅಧ್ಯಯನಗಳಿಗೂ ಈ ಗ್ರಂಥ ವಿಶೇಷ ಪ್ರಚೋದನೆ ನೀಡಿತು. ನಿರಾತಂಕ ಹಾಗೂ ಪರಿಪೂರ್ಣ ಪೈಪೋಟಿ ಇರುವ ಬಂಡವಾಳ ವ್ಯವಸ್ಥೆಯಲ್ಲಿ ಸರಬರಾಯಿ ತನ್ನ ಬೇಡಿಕೆಯನ್ನು ತಾನೇ ಹುಟ್ಟಿಸಿಕೊಳ್ಳುವುದು-ಎಂಬ ಜೆ.ಬಿ.ಸೇ. ನಿಯಮದ ಪ್ರಕಾರ ಉತ್ಪಾದನೆಯ ಸಾರ್ವತ್ರಿಕ ಆಧಿಕ್ಯ ಮತ್ತು ಅನೈಚ್ಛಿಕ ನಿರುದ್ಯೋಗ ಅಸಂಭವವೆಂಬುದು ಪೂರ್ಣೋದ್ಯೋಗದ ಮಟ್ಟದಲ್ಲಿ ಮಾತ್ರ ಆರ್ಥಿಕತೆ ಸಮತೋಲದಲ್ಲಿರುವುದೆಂಬುದೂ ಅಗೋಚರ ಮಾರುಕಟ್ಟೆ ಶಕ್ತಿಗಳ ಕ್ರಿಯೆಯಿಂದ ಈ ಪೂರ್ಣೋದ್ಯೋಗ ಸಮತೋಲ ಸ್ಥಿತಿಯನ್ನು ಆರ್ಥಿಕತೆ ಸ್ವಯಂನಿಯಂತ್ರಿತವಾಗಿ ತಲುಪುವುದೆಂಬುದೂ ಆವರೆಗೆ ಪ್ರಚಲಿತವಾಗಿದ್ದ ಅಭಿಜಾತಸಿದ್ಧಾಂತದ ಪ್ರತಿಪಾದನೆಯಾಗಿತ್ತು. ಈ ವಾದ ದೋಷಯುತ ಎಂಬುದನ್ನು ಕೇನ್ಸ್ ತೋರಿಸಿಕೊಟ್ಟ. ಉದ್ಯೋಗ ಮತ್ತು ವರಮಾನ ಮಟ್ಟಗಳ ಮುಖ್ಯ ನಿರ್ಣಾಯಕಾಂಶಗಳು ಯಾವುವು ಎಂಬುದರ ಬಗ್ಗೆ ಹೊಸ ವಿವರಣೆ ನೀಡಿದ. ಈ ಶತಮಾನದಲ್ಲಿ ವಿಕಾಸವಾಗಿ ಬಂದಿರುವ ಬಂಡವಾಳ ವ್ಯವಸ್ಥೆಯಲ್ಲಿ ಪೂರ್ಣೋದ್ಯೋಗ ಮತ್ತು ಸ್ಥಿರತೆಯ ಸ್ಥಾಪನೆಗೆ ಆರ್ಥಿಕ ಕ್ಷೇತ್ರದಲ್ಲಿ ನಿರ್ದಿಷ್ಟ ಸ್ವರೂಪದ ಹಾಗೂ ಪ್ರಮಾಣದ ಸರ್ಕಾರಿ ಪ್ರವೇಶ ಆವಶ್ಯಕ ಎಂಬ ಅಭಿಪ್ರಾಯವನ್ನು ಕೇನ್ಸ್ ಎತ್ತಿ ಹಿಡಿದಿದ್ದಾನೆ. 
ಉದ್ಯೋಗವನ್ನು ಕುರಿತ ಕೇನ್ಸ್ ಸಿದ್ಧಾಂತಕ್ಕೆ - (ನೋಡಿ- ಉದ್ಯೋಗ-ಮೀಮಾಂಸೆ)

	ಇದು ಕೇವಲ ಮುಗ್ಗಟ್ಟಿನ ಅರ್ಥಶಾಸ್ತ್ರ ಎಂದು ಈ ಗ್ರಂಥ ಕೆಲವರ ಟೀಕೆಗೆ ಒಳಗಾಗಿರುವುದಾದರೂ ಇದರಲ್ಲಿ ಬಂಡವಾಳ ವ್ಯವಸ್ಥೆಯ ಭವಿಷ್ಯ ಕುರಿತ ಒಂದು ವಾಸ್ತವಿಕ ಚಿತ್ರಣ ಇದೆ. ವ್ಯಕ್ತಿಗತ ಆರ್ಥಿಕ ಸ್ವಾತಂತ್ರ್ಯ ಪದ್ಧತಿಯ ಕುಂದು ಕೊರತೆಗಳನ್ನು ಹೋಗಲಾಡಿಸುವುದು ಸಾಧ್ಯವಾದರೆ ಆ ಪದ್ಧತಿಗಿಂತ ಮೇಲಾದ ಆರ್ಥಿಕ ಪದ್ಧತಿ ಇಲ್ಲ ಎಂಬುದು ಕೇನ್ಸ್‍ನ ನಂಬಿಕೆ. ಆ ಕೊರತೆಗಳ ನಿವಾರಣೆಗೆ ಆವಶ್ಯಕವಾದ ಸರ್ಕಾರಿ ಪ್ರವೇಶ ಹಾಗೂ ನೀತಿಗಳನ್ನು ಈತ ವಿವರಿಸಿದ್ದಾನೆ.

	ಆಧುನಿಕ ಆರ್ಥಿಕ ನೀತಿಯಂತೆಯೇ ಆಧುನಿಕ ಆರ್ಥಿಕ ಸಿದ್ಧಾಂತದ ಮೇಲೂ ಕೇನ್ಸನ ಅರ್ಥಶಾಸ್ತ್ರ ಗಣನೀಯವಾದ ಪ್ರಭಾವ ಬೀರಿತು. ಆಧುನಿಕ ಅರ್ಥಶಾಸ್ತ್ರ ಬಹುಮಟ್ಟಿಗೆ ಕೇನ್ಸನ ಅರ್ಥಶಾಸ್ತ್ರವಾಗಿದೆ. ಆತ ಸೃಜಿಸಿದ ಪಾರಿಭಾಷಿಕ ಪದಗಳನ್ನೂ ಆತನ ವಿಶ್ಲೇಷಣೆಯ ಮಾರ್ಗವನ್ನೂ ಅನುಸರಿಸಿ ಇತ್ತೀಚೆಗೆ ಅರ್ಥಶಾಸ್ತ್ರ ಮುಂದುವರಿದಿದೆ. ಸ್ಥಿರವಾದ ಹಾಗೂ ಪೂರ್ಣೋದ್ಯೋಗಸಹಿತವಾದ ಆರ್ಥಿಕ ಬೆಳವಣಿಗೆ ಕುರಿತ ಅಧ್ಯಯನವಾದ ಆಧುನಿಕ ಅಭಿವೃದ್ಧಿ ಅರ್ಥಶಾಸ್ತ್ರದ ಇತ್ತೀಚಿನ ಚಿಂತನೆ ಬಹುಮಟ್ಟಿಗೆ ಕೇನ್ಸನ ವಿಶ್ಲೇಷಣೆಯನ್ನೇ ಆಧರಿಸಿದೆ.

	ಸಾರ್ವತ್ರಿಕ ಸಿದ್ಧಾಂತ ಪ್ರಕಟವಾದ ಮರುವರ್ಷವೇ ಕೇನ್ಸ್ ಹೃದ್ರೋಗಕ್ಕೀಡಾದ. ಇದರಿಂದ ಚೇತರಿಸಿಕೊಂಡ ಅನಂತರ ಎರಡನೆಯ ಮಹಾಯುದ್ಧಕಾಲದಲ್ಲಿ ಬ್ರಿಟಿಷ್ ಖಜಾನೆ ಶಾಖೆಯಲ್ಲಿ ಉಪಯುಕ್ತ ಸೇವೆ ಸಲ್ಲಿಸಿದ. 1945ರಲ್ಲಿ ಬ್ರಿಟನ್ ಅಮೆರಿಕದಿಂದ ಎತ್ತಿದ ಮುಖ್ಯ ಸಾಲಕ್ಕೆ ಸಂಬಂಧಿಸಿದ ಸಂಧಾನಗಳಲ್ಲಿ ಕೇನ್ಸನ ಪಾತ್ರ ಪ್ರಭಾವಯುತವಾದ್ದು.

	ಯುದ್ಧೋತ್ತರ ವಿಶ್ವದ ಪುನವ್ರ್ಯವಸ್ಥೆಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಹಣ ಹಾಗೂ ಬಂಡವಾಳ ಸಂಸ್ಥೆಗಳನ್ನು ರೂಪಿಸಲು ಬ್ರೆಟನ್‍ವೂಡ್ಸ್‍ನಲ್ಲಿ ನಡೆದ ಸಮ್ಮೇಳನದ ಪರಿಶೀಲನೆಗಾಗಿ ಅಂತರರಾಷ್ಟ್ರೀಯ ತೀರುವೆ ಸಂಘದ ರಚನೆಯನ್ನು ಕುರಿತು ಕೇನ್ಸ್ ಸಿದ್ಧಪಡಿಸಿದ ಯೋಜನೆ ಮುಖ್ಯವಾಗಿ ಒಂದು ಆಧಾರವಾಯಿತು. ತಾನು ರಚಿಸಿದ ಯೋಜನೆಯನ್ನು ಒಳಗೊಂಡ ರೀತಿನೀತಿಗಳನ್ನು ಆ ಸಮ್ಮೇಳನದಲ್ಲಿ ಸಮರ್ಥಿಸಿ ವಾದಿಸಿದ. ಆ ಸಮ್ಮೇಳನದ ಫಲವಾಗಿ ಸ್ಥಾಪಿತವಾದ ಅಂತರರಾಷ್ಟ್ರೀಯ ದ್ರವ್ಯ ನಿಧಿ ಕೇನ್ಸ್ ಯೋಜನೆಯ (ನೋಡಿ- ಕೇನ್ಸ್-ಯೋಜನೆ) ಎಲ್ಲ ಅಂಶಗಳನ್ನೂ ಒಳಗೊಳ್ಳಲಿಲ್ಲವಾದರೂ ಆ ಸಂಸ್ಥೆಯ ವಿಕಾಸಕ್ಕೆ ಇದು ಮಾರ್ಗದರ್ಶಕವಾಯಿತು.

	ಕೇನ್ಸ್ ಕೇವಲ ತಾತ್ತ್ವಿಕ ಅರ್ಥಶಾಸ್ತ್ರಜ್ಞನಾಗಿರಲಿಲ್ಲ. ಜೀವವಿಮೆ, ವಿನಿಯೋಜನೆ, ಪ್ರಕಟಣೆ ಇತ್ಯಾದಿ ಉದ್ಯಮಗಳಲ್ಲೂ ಆತ ಆಸಕ್ತಿ ವಹಿಸಿದ್ದ. ಬಂಡವಾಳ ಪೇಟೆಯಲ್ಲೂ ಯಶಸ್ವಿಯಾಗಿ ವ್ಯವಹಾರ ನಡೆಸುತ್ತಿದ್ದ. ಚೆನ್ನಾಗಿ ಹಣ ಸಂಪಾದಿಸಿದ. 1942ರಲ್ಲಿ ಪಿಯರೆಜ್ ಪಡೆದ. 1946ರಲ್ಲಿ ನಿಧನ ಹೊಂದಿದ. ಈತ ಬಿಟ್ಟುಹೋದ ಆಸ್ತಿಯ ಮೌಲ್ಯ ಸು. 4ಳಿ ಲಕ್ಷ ಪೌಂ. 

 (ಎ.ಪಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ